Thursday, February 2, 2012

ಹೀಗೊಂದು ಉಡುಗೊರೆ

ಅದೊಂದು ಹೊಂಬಣ್ಣದ ಸ್ಯಾಟಿನ್ ಹೂ.ಗಿಫ್ಟ್ ಡಬ್ಬಗಳ ಮೇಲೆ ಅಲಂಕಾರಿಕವಾಗಿ ಕೂರುವಂಥದ್ದು.ಅಪ್ಪಿಗೆ ಕ್ಲ್ಯಾಸೆಟ್ಟಿನಲ್ಲಿಎಲ್ಲೋ ಸಿಕ್ಕಿರ ಬೇಕು. ನೆನ್ನೆ ಸಂಜೆ ತೇಜಸ್ವಿಯವರ ಜುಗಾರಿಕ್ರಾಸ್ ಓದುತ್ತಾ ಸೋಫಾದ ಮೇಲೆ ಕೂತಿದ್ದೆ.ಈ ಚಿನ್ನದ ಹೂವನ್ನು ತಂದು ನನ್ನ ತಲೆ ಮೇಲೆ ಇಟ್ಟು ಗಿಫ್ಟ್
ಗಿಫ್ಟ್ ಅಂದ. ಓ ನನಗೆ ಈ ಹೂವನ್ನ ಗಿಫ್ಟ್ ಕೊಡುತ್ತಿದ್ದಾನೆ ಅಂದು ಕೊಳ್ಳುತ್ತಾ ಹೂವನ್ನು ಕೈಗೆತ್ತಿಕೊಂಡು ನಗುತ್ತಾ ಥ್ಯಾಂಕ್ಸ್ ಅಂದೆ. ಅದಕ್ಕವನು ನೋ..ನೋ ..ನೋ...ಅನ್ನುತ್ತಾ ನನ್ನ ಕೈಲಿದ್ದ ಹೂವನ್ನು ಕಸಿದುಕೊಂಡು ಮತ್ತೆ ನನ್ನ ತಲೆ ಮೇಲಿಟ್ಟು ಗಿಫ್ಟ್ ಗಿಫ್ಟ್ ಅಂದ
ಅರ್ಥವಾಗದೇ ನಾನು ಅವನ ಮುಖವನ್ನೇ ನೋಡಿದೆ.ಅವನ ವಿವರಣೆ ಬಂತು‘ದಿಸ್ ಇಸ್ ನಾಟ್ ಗಿಫ್ಟ್ ....ಯೂ ಆರ್ ಗಿಫ್ಟ್...!
ಹೆಂಗಸರನ್ನು ಸಾಮಾನಿನಂತೆ ಪರಿಗಣಿಸುವ ಹದಿನೆಂಟನೇ ಶತಮಾನದ ಮನೋಭಾವದವರನ್ನು ಕಂಡರೆ ನನಗೆ ಕೆಂಡದಂಥ ಕೋಪ.ಎದುರಿಗಿರುವುದು ಮಗು ಅಂತ ಕೋಪ ಅದುಮಿಕೊಂಡು ಸೀರಿಯಸ್ಸಾಗಿ ಅವನ ಮುಖವನ್ನೇ ನೋಡಿದೆ.ನನ್ನ ಕೈ ಹಿಡಿದೆಳೆದು ಕಮ್ ಕಮ್...ಅಂತ ಎಬ್ಬಿಸಿದ ನನ್ನ ಬೆನ್ನನ್ನು ತನ್ನ ಎರಡೂ ಪುಟ್ಟ
ಕೈಗಳಿಂದ ನೂಕುತ್ತಾ ರೂಮಿಗೆ ಕರೆದೊಯ್ಯೊದು ‘ಅಪ್ಪನ ಮುಂದೆ ನಿಲ್ಲಿಸಿ
‘ಹಿಯರ್ ಈಸ್ ಯುವರ್ ಡೆಲಿವರಿ...’ಅಂತಂದು ಓಡಿಹೋದ

ಯಾವುದೋ ಎಸ್ಕಲೇಶನ್ ಮೀಟಿಂಗ್ ನಲ್ಲಿ ಕಳೆದು ಹೋದ ಅಪ್ಪನಿಗೆ ಅಮ್ಮುವಿನ ಮಾತುಗಳು ಕಿವಿಗೆ ಬೀಳಲಿಲ್ಲ
ನನಗೆ ತಲೆ ಕೆಟ್ಟು ಬೆಪ್ಪಾಗಿ ನಿಂತು ಬಿಟ್ಟೆ

ಮತ್ತೆರಡು ಗಳಿಗೆ ನಂತರ ಮತ್ತೆ ರೂಮಿಗೆ ಇಣುಕಿ ಅಪ್ಪನಿಗೆ ಆಪ್ಪಾ....ಹಪ್ಪಾ...ಅಂತಾ ಪಟ ಪಟ ಹೊಡೆದು ಎಚ್ಚರಿಸಿ...ಹಿಯರ್ ಯುಗೋ...ಶೀ ಈಸ್ ಯುವರ್ ಗಿಫ್ಟ್....’ಎಂದು ನನ್ನ ಅಪ್ಪನಿಗೆ ಒಪ್ಪಿಸಿ ಓಡಿಹೋದ.....

ಆಹಾ...ಮರಿ ಎಮ್.ಸಿ.ಪಿ ಅಂತ ನಾನು ಬೈದು ಕೊಂಡೆ...!



ಈಗ ಹೊಳೆದದ್ದು-ಅಮ್ಮನಂಥಾ ಇಷ್ಟೊಳ್ಳೆ ಉಡುಗೊರೆ ಕೊಡ್ತಿದೀನಿ ಸದಾ ಕೆಲಸದಲ್ಲಿ ಮುಳುಗಿರುವುದನ್ನು ಬಿಟ್ಟುಅಮ್ಮನ ಕಡೆ ಸ್ವಲ್ಪ ನೋಡು ಅಂತ ತನ್ನಪ್ಪನನ್ನು ಎಚ್ಚರಿಸಿದನೇ ನನ್ನ ಮಗ?
ಮಗನೆಂಬ ಮಮಕಾರ ನೋಡಿ ಅವನೇನು ಮಾಡಿದರೂ ಅಮ್ಮನಿಗೆ ಚೆಂದ ಅಲ್ಲವೇ?