ಆಗಾಗ ಅವನು ಹೊಸ ಪದಗಳನ್ನು ವಟವಟಾಯಿಸಿದಾಗಲೆಲ್ಲಾ ಇಲ್ಲಿ ಅವುಗಳು ಕಾಣಿಸಿಕೊಳ್ಳುತ್ತವೆ
ಅವನು ಮಾತಾಡಿದ್ದಕ್ಕೆಲ್ಲಾ ಅರ್ಥ ಇರಲೇ ಬೇಕೆಂದು ನಿಯಮವೇನೂ ಇಲ್ಲವಷ್ಟೇ ಅಥ್ವಾ ಅವನ ಪ್ರತಿ ಪದಕ್ಕೂ ಖಂಡಿತಾ ಅರ್ಥವಿದ್ದೇ ಇರುತ್ತದೆ ಜಗತ್ತಿನ ಯಾವುದೋ ಭಾಷೆಯಲ್ಲಿ ಎಂಬ ನಂಬಿಕೆಯೊಂದಿಗೆ...
ಈಗೆರಡು ತಿಂಗಳ ಹಿಂದೆ ಒಂದು ವರ್ಷದವನಿದ್ದಾಗ ಅಮರ್ತ್ಯ ಪದೇ ಪದೇ ಹೇಳುತ್ತಿದ್ದದು ಬಾ... ಬಾ...ಬಕ್ಕ ಬಾ... ಅಂತ
ಬಾ ಮತ್ತು ಬಕ್ಕ ಗಳ ಎಲ್ಲಾ ಪರ್ಮುಟೇಶನ್ ಕಾಂಬಿನೇಶನ್ಗಳನ್ನು ಮಾಡಿ ಹೇಳುತ್ತಿದ್ದ
ಬಕ್ಕ... ಬಕ್ಕ... ಬಕ್ಕ...ಬಾ...
ಬಕ್ಕ... ಬಾ..ಬಾ ಮತ್ತು
ಬಕ್ಕ.. ಬಕ್ಕ ..ಬಾ.. ಬಾ.. ಬಾ..
ಬಕ್ಕ..ಬಕ್ಕ.. ಬಾಆಆಆಅ..ಇತ್ಯಾದಿ ಇತ್ಯಾದಿ
ಇಲ್ಲಾ,ಇಲಾ ,ಇಲ್ಯಾ.ಇಲ್ಲಲ್ಲ.ಇಲ್ಲಿಲ್ಲಾ ಇವು ತುಂಬಾ ಮೊದಲಿನಿಂದ ಇದ್ದವು
ಈಗ ಇವುಗಳ ಜೊತೆ ಹಕ್ಕ ಬುಕ್ಕರಂತೆ ಬಕ್ಕ ಮತ್ತು ಬಾ ಸೇರಿಕೊಂಡವು
ಈ ಇಲ್ಲ ಸರಣಿ ಮತ್ತು ಬಕ್ಕ ಬಾ ಗಳ ನಡುವಿನ ಅವಧಿಯಲ್ಲಿ ಅಮ್ಮ ಅಮ್ಮಿ ಶುರುವಾಗಿದ್ದು.
ಕೆಲವು ದಿನ ನನ್ನನ್ನು ಅಮ್ಮ ಅಂತ ಕರೆದು ನಂತರ ನಮ್ಮಿಬ್ಬರನ್ನೂ ಅಮ್ಮ ಅಂತ ಕರೆಯಲು ಶುರು ಮಾಡಿದ
ಒಂದೆರಡು ದಿನ ಬೇರೇನೋ ವಸ್ತು ಅಮ್ಮ ಆಗಿತ್ತು ಮತ್ತು ನಂತರ ಅಮ್ಮ ಮಾಯವಾಯಿತು
ಈಗ ಮತ್ತೆ ಅಮ್ಮ ಬಂದಿದೆ
ಅಫ್ ಕೋರ್ಸ್ ಜೊತೆಗೊಂದು ಬಾಲದೊಂದಿಗೆ "ಅಮ್ಮಮಮ್ಮಾ"ಅಂತ
ಈ ಬಾರಿ he is clear ನಾನು ಮಾತ್ರ ಅಮ್ಮಮಮ್ಮ!
ಅಪ್ಪ ಪಾಪ...ಸದ್ಯಕ್ಕೆ ಹೆಸರಿಲ್ಲದ ಪ್ರಾಣಿ!
ಕಾವೇರಿಯಲ್ಲೂ ಮರ್ಸೆಡ್ ನಲ್ಲೂ ಸಾಕಷ್ಟು ನೀರು ಹರಿದಿದೆಯಲ್ಲಾ..
ಹಾಗೇ ಅಮರ್ತ್ಯನ ಅರ್ಥವಿಲ್ಲದ ಮಾತಿನ ಸರಣಿಯೂ ಹರಿದಿದೆ
ಸುಸಂಬದ್ದವಲ್ಲದ ಅಕ್ಷರ ಸರಣಿಯನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಕಷ್ಟ
ಕಾ...ಕಯಮ್..ಜಮ್..ಜುಮ್...ಗಂ..ಕಿಕ್ಕ..ಪಿಪ್ಯಾ...ಪಿಕೋ..
ಹೀಗೆಲ್ಲಾ ಇಡೀ ದಿನ ವಾರ್ತಾಲಾಪ ನಡೆಯುತ್ತಿರುತ್ತದೆ ಕೆಲವೊಮ್ಮೆ ಮಧ್ಯರಾತ್ರಿ ನಡು ಹಾಸಿಗೆಯಲ್ಲಿ ಎದ್ದು ಕುಳಿತು ಸಂಗೀತ ಕಛೇರಿ ಶುರು ಮಾಡಿ ಬಿಡುತ್ತಾನೆ
ಈಗೆರಡು ದಿನದಿಂದ ಬೀ ಮತ್ತು ಬೇ ಶುರುವಾಗಿದೆ
ಎರಡು ಯಾವಾಗಲೂ ಜೊತೆ ಜೊತೆಗೇ ಬಾಯಿಂದ ಹೊರಬರುತ್ತವೆ
ಕೆಲವು ಉದಾಹರಣೆಗಳು ಹೀಗೆ....
ಬೀಬಿ-ಯಾವ ಬೀಬಿಯೋ ಇವಳು .. ಚಾಂದ್ ಬೀಬಿ ಇರಬಹುದಾ?
ಬೇ ಬೇ- ನಾನು ಚಿಕ್ಕವಳಿದ್ದಾಗ 'ಬೇಡ' ಎನ್ನಲು ಬೇ ಬೇ ಅನ್ನುತ್ತಿದ್ದೆನಂತೆ ಹಾಗಂತ ಅಮ್ಮ ಹೇಳ್ತಾರೆ ನನ್ನ ಮಗನಿಗೂ ರಕ್ತದಲ್ಲೇ ಇದು ಬಂದಿರಬಹುದಾ!!!
ಬೇಬಿ-ಇದು ಬೊಂಬಾಟ್ ನೆನ್ನೆ ವಾಕಿಂಗ್ ಕರೆದು ಕೊಂಡು ಹೋದಾಗ ಸುಮಾರು ತನ್ನಷ್ಟೇ ವಯಸ್ಸಿನ ಮಗುವನ್ನು ಅಮ್ಮು 'ಬೇಬಿ...'ಅಂತ ಕರೆದು ನಿಂತಲ್ಲೇ ನಿಂತು ಬಿಟ್ಟಆ ಬೇಬಿಯ ಚೀನೀ ಅಪ್ಪ ಅಮ್ಮನಿಗೆ ಖುಷಿಯೋ ಖುಷಿ.ನಾನು ಮೊದಲು ನಿಮ್ಮ ಮಗುವನ್ನಲ್ಲಾ ಅವನು ಬೇಬಿ ಅಂದಿದ್ದು ಅಂತ ಆ ಚೀನಿ ದಂಪತಿಗಳಿಗೆ ಸಮಜಾಯಿಸಲು ಪ್ರಯತ್ನಿಸಿದೆನಾದರೂ ಅವರು ನನ್ನ ಮಾತು ಕೇಳಲೇ ತಯಾರಿರಲ್ಲಿಲ್ಲ ಇವನು ತನ್ನೆಲ್ಲಾ ಅಸಂಬದ್ಧ ಪ್ರಲಾಪಗಳ ನಡುವೆ ಇನ್ನೊಮ್ಮೆ ಬೇಬಿ ಅನ್ನುತ್ತಾನೇನೋ ಅಂತ ಕಾದುಕೊಂಡು ಇವನನ್ನು ಮಾತಾಡಲು ಪ್ರೋತ್ಸಾಹಿಸುತ್ತಿದ್ದರು ಇವನೂ ಸಿಕ್ಕಿದ್ದೇ ಚಾನ್ಸು ಅಂತ ಬಾಯಿಗೆ ಬಂದಿದ್ದನ್ನೆಲ್ಲಾ ವದರುತ್ತಿದ್ದ ಎರಡೂ ಪಾರ್ಟಿಯವರೂ ಸಂತೋಷವಾಗಿರುವಾಗ ನನ್ನದೇನು ಕಿತಾಪತಿ ಅಂತ ಕೊನೆಗೆ ನಾನು ಸುಮ್ಮನಾಗಿ ಬಿಟ್ಟೆ