Tuesday, September 30, 2008

ಮುದ್ದುಕನಸೇ...


ಮುದ್ದು ಕನಸೇ ಮುದ್ದು ಕನಸೇ
ಇಳೆಗಿಳಿದು ಬಾ...
ಚಂದ್ರನೂರಿಂದ ತೇಲಿ ಬಂದು
ಪುಟ್ಟಂಗೆ ಮುತ್ತೊಂದ ತಾ...

ತಾರೆಗಳ ಕಾಂತಿಯಲಿ
ಮಿನುಗಿ ಮುತ್ತಾಗಿ ಬಾ
ಮಲಗಿರುವ ಮಗುವ
ಮುದ್ದು ನಗುವಾಗಿ ಬಾ

ಇಬ್ಬನಿಯ ತಂಪಲ್ಲಿ
ನಗುವ ಹೂವಾಗಿ ಬಾ
ಅರೆತೆರೆದ ಚೆಂದುಟಿಯ
ಮೇಲೆ ನಲಿದಾಡು ಬಾ

ಬೆಳಂದಿಂಗಳ ರಾತ್ರಿಯಲಿ
ಮಲ್ಲಿಗೆ ಅರಳಾಗಿ ಬಾ
ಘಮಘಮಿಸಿ ಹೊಳೆದು
ಪುಟ್ಟಗೆ ಸವಿ ನಿದ್ದೆಯ ತಾ
-ಅಮ್ಮುವಿನಮ್ಮ

Saturday, September 27, 2008

Wednesday, September 24, 2008

ಅಮ್ಮು ...ಅಮ್ಮ...


ಯಾರು ನನ್ನ ಚಿನ್ನ ರನ್ನ?
ನಾನು ನಾನು ನಾನು
ಅದನ್ ಸದಾ ಹಾಕ್ಕೋಳೋಳು
ನೀನು ನೀನು ನೀನು

ಯಾರು ನನ್ನ ಕಳ್ಳ ಕೃಷ್ಣ?
ನಾನು ನಾನು ನಾನು
ಹಾಲು ಬೆಣ್ಣೆ ತಿನ್ಸೋ ಗೋಪಿ?
ನೀನು ನೀನು ನೀನು

ತಿಂಡಿ ಕದ್ದು ತಿನ್ನೋ ಇಲಿ?
ನಾನು ನಾನು ನಾನು
ಕಿವಿ ಹಿಂಡಿ ಬಿಡಿಸಿ ಬೈಯೋಳ್?
ನೀನು ನೀನು ನೀನು

ಹಿಡಿದು ಬಡಿದು ಹೊಡೆದು ಕಡೆಗೆ
ಸೋಲೋದ್ ಯಾರು? ನೀನು!
ಅತ್ತು,ಕರೆದು ಬೈಸಿಕೊಂಡ್ರೂ
ಕಡೆಗ್ ಗೆಲ್ಲೋದ್? ನಾನು!

-ಲಕ್ಶ್ಮೀ ನಾರಾಯಣ ಭಟ್ಟ
ನನ್ನ ಚಿನ್ನ ರನ್ನ ಅಮ್ಮುನ ಸದಾ ಹಾಕ್ಕೋಳೋಳು ನಾನೇ ಆದ್ರೂ ಉಳಿದ ಮೂರು ನುಡಿಗಳು ಸದ್ಯಕ್ಕೆ ಅಮ್ಮುವಿನ ಮಟ್ಟಿಗೆ ಜಾರಿಯಲ್ಲಿಲ್ಲ! ಸದ್ಯ....

Saturday, September 20, 2008

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ...


ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ತೊಟ್ಟಲಿನೊಳಗೆ ಪುಟ್ಟ ಕಂದ ಮಲಗಿಹನು
ಸೃಷ್ಟಿಗೊಡೆಯನ ಮಡದಿಯ,ಪಾರ್ವತಿ ದೇವಿ
ದೃಷ್ಟಿ ತಗುಲೀತು ತೆರೆ ಹಾಕ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ಅಳಬೇಡ ನನ ಕಂದ ನಿನಗೆ ಜೋಗುಳ ಹಾಡಿ
ಹುಣ್ಣಿಮೆ ಹಾಲು ತಂದು ಉಣಿಸೇನ,ಮಾವನ ಮಗಳ
ಕರ ತಂದು ಧಾರೆ ಎರೆದೇನ....

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ


ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಾಗ ಆಡುವಾಗ
ಸನ್ಯಾಸಿ ಜಪವಾ ಮರೆತಾನೂ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

Saturday, September 13, 2008

ಚಿಂವ್ ಚಿಂವ್ ಗುಬ್ಬಿ...


ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?

ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?

ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?

ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ

ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

-ಎ.ಕೆ.ರಾಮೇಶ್ವರ

Thursday, September 11, 2008

ಗಿಂಡಿ Vs ವಾಟರ್ ಬಾಟಲ್

ಬಾಟಲ್ ನನ್ನ ಒಲವಿನ ವಾಟರ್ ಬಾಟಲ್...

**********
ನನಗಾಗ ಸುಮಾರು ನಾಲ್ಕು ವರ್ಷವಿರಬಹುದು.
ಒಂದು ದಿನ ಅಟ್ಟದಲ್ಲಿ ಏನೋ ಹುಡುಕುತ್ತಿದ್ದ ಅಮ್ಮ ಹಳೆ ಪಾತ್ರೆಗಳ ನಡುವೆ ಸುಖವಾಗಿ ಮಲಗಿದ್ದ ಸಣ್ಣ ಗಿಂಡಿಯೊಂದನ್ನು ಅಪ್ಪಿ ತಪ್ಪಿ ಹೊರ ತೆಗೆದು ಹಾಕಿಬಿಟ್ಟರು ಮತ್ತು ಆ ಪಾಪದ ಪ್ರಾಣಿ ನನ್ನ ಕಣ್ಣಿಗೆ ಆಕ್ಷಣ ಬಿದ್ದು ಬಿಟ್ಟಿತು
ಶುರುವಾಯಿತಲ್ಲ ಆ ಗಿಂಡಿಗೆ ಶನಿ ದೆಸೆ...

"ಗಿಂಡಿ ತುಂಬಾ ಪುಟ್ಟ ಪಾಪುಗಳು ಹಾಲು ಕುಡಿಯುವುದು ಕಣೆ" ಅಂತ ಅಮ್ಮ ಎಷ್ಟೆಷ್ಟು ಸಮಜಾಯಿಸಿದರೂ ಕೇಳದೆ ನಾನು ಇನ್ನು ಮೇಲೆ ಗಿಂಡಿಯಲ್ಲೇ ಹಾಲು ಕುಡಿಯುವುದು ಅಂತ ಹಟಮಾಡತೊಡಗಿದೆ
ಅಷ್ಟೊತ್ತಿಗೆ ನನ್ನ ತಂಗಿ ಕೂಡಾ ಲೋಟದಲ್ಲಿ ಕುಡಿಯಲು ಶುರು ಮಾಡಿದ್ದಳೆಂದರೆ ಮನೆಯವರಿಗೆಲ್ಲಾ ನನ್ನ ಹಟ ಎಷ್ಟು ತಮಾಶೆ ಎನ್ನಿಸಿರಬೇಡ...!

`ಸರಿ ಕುಡ್ಕೋ ಹೋಗ್' ಅಂತ ಅಮ್ಮ ಸುಮ್ಮನಾಗಿ ಬಿಟ್ಟರು
ಆ ಗಿಂಡಿಯಲ್ಲಿ ಹಾಲು ಹಾಕಿದರೆ ಅದು ಸೋರಲು ಶುರವಾಗಬೇಕೇ..?
ನಾನು ಬಿಡುತ್ತೇನೆಯೇ...ಗಿಂಡಿ ತಳದಲ್ಲಿ ಒಂದು ತಟ್ಟೆ ಇರಿಸಿಕೊಂಡು ಕುಡಿಯಲೆತ್ನಿಸಿದೆ
ಹೇಳೀ ಕೇಳಿ ಅದು ಪಾಪುಗಳು ಕುಡಿಯುವ ಗಿಂಡಿ ಒಂದು ಸಾರಿಗೆ ಕಾಲು ಲೋಟ ಹಾಲು ಹಿಡುಸುತ್ತಿತ್ತು ಅಷ್ಟೇ
ಹಾಕಿದ ಹಾಲೆಲ್ಲಾ ಸುರಿದು ಹೋದರೆ ಒಂದು ಲೋಟ ಹಾಲು ಕುಡಿಯಲು ನಾನೆಷ್ಟು ಶ್ರಮ ಪಟ್ಟಿರಬಹುದು ಯೋಚಿಸಿ..
ನಾನು ಛಲ ಬಿಡದ ತ್ರಿವಿಕ್ರಮನಂತೆ ಆ ತೂತು ಗಿಂಡಿಯಲ್ಲೇ ಹಾಲು ಕುಡಿಯತೊಡಗಿದೆ
ನನ್ನ ಗಿಂಡಿ ಹುಚ್ಚು ಎಲ್ಲಿಗೆ ಹೋಯಿತೆಂದರೆ ಗಿಂಡಿಯಲ್ಲಿ ನೀರು ತುಂಬಿಕೊಂಡು ದಿನವೆಲ್ಲಾ ಕುಡಿಯಲು ಶುರು ಮಾಡಿದೆ
ಕೊನೆಗೆ ನೀರು ಕುಡಿದೂ ಕುಡಿದೂ ರಾತ್ರಿ ಹೊಟ್ಟೆ ನೋವು ಬಂತು
ನಾನು ಗಿಂಡಿಗೆ ಬೈ ಬೈ ಹೇಳಿದ್ದು ಹೀಗೆ...
***********


ಹಾಲಿಗಿಂಥ ನೀರೇನೇ ಚಂದವೂ....
ತುತ್ತು ಅನ್ನತಿನ್ನದೇ ಇದ್ದರೂ ಹತ್ತು ಬಾಟಲ್ ನೀರು ಕುಡಿಯಿರಿ...
ಕಾವೇರಿಗೇ ಜೈ...

ಯಾರೇ ಕೂಗಾಡಲೀ...
ನೀರೇ ನಿನಗೆ ಸಾಟಿ ಇಲ್ಲ...
ಅರೆ ಹೊಯ್ ಅರೆ ಹೊಯ್
ಟುರ್ ಬ್ಯಾ.....
**************
ಆರವ್ ಹತ್ತಿರ ಇದ್ದ ವಾಟರ್ ಬಾಟಲ್ ನೋಡಿ ಅಮರ್ತ್ಯ ತುಂಬಾ ಆಸೆ ಪಟ್ಟಿದ್ದರಿಂದ ಅವನಿಗೂ ವಾಟರ್ ಬಾಟಲ್ ಕೊಡಿಸಿದ್ದೇವೆ
ಮೂರು ದಿನದಿಂದ ಏನೂ ತಿನ್ನದೆ ಹಾಲು ಕೂಡಾ ಕುಡಿಯದೆ ಬರೀ ನೀರು ಕುಡಿಯುತ್ತಿದ್ದಾನೆ
`ಸರಿ ಕುಡ್ಕೋ ಹೋಗ್' ಅಂತ ಬಿಟ್ಟು ಬಿಡಲು ನನಗೇಕೋ ಆಗುತ್ತಿಲ್ಲ
ಇವನಿಗೆ ಹೊಟ್ಟೆ ನೋವು ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ
ಅವನು ಘಳಿಗೆಗೊಂದು ಸಾರಿ ಉಚ್ಚೆ ಮಾಡಿಕೊಂದು ನನ್ನನ್ನು ಸತಾಯಿಸುತ್ತಿದ್ದಾನೆ.

Thursday, September 4, 2008

ಪಾರ್ಕಿ ಗೆ ಹೋದಾಗ...




ಅಮರ್ತ್ಯನನ್ನೂ ಆರವ್ ನನ್ನೂ ಒಂದು ಭಾನುವಾರ ಪಾರ್ಕಿಗೆ ಕರಕೊಂಡು ಹೋಗಿದ್ದೆವು ಇಬ್ಬರೂ ಕುಣಿದು ಕುಪ್ಪಳಿಸಿದರು
ಜಾರು ಬಂದೆ ಜಾರಿದರು ಆಟದ ಕುದುರೆಸವಾರಿ ಮಾಡಿದರು ಮತ್ತು ಚೆಂಡಾಡಿದರು ಫೋಟೋ ತೆಗೆದದ್ದು ಸೋಮ್ ಅಂಕಲ್