Showing posts with label ಜನಪದ ಗೀತೆ. Show all posts
Showing posts with label ಜನಪದ ಗೀತೆ. Show all posts

Saturday, April 11, 2009

ಕಂದಯ್ಯ ನಿನ್ನಾಸೆ ನನಗೇ ಅನುಗಾಲ...



ಬೆಟ್ಟಕ್ಕೆ ಬಿದಿರಾಸೆ ಹೆಣ್ಣಿಗೆ ತೌರಾಸೆ
ಬಿತ್ತಿದ ಬೆಳೆಗೇ ಮಳೇಯಾಸೆ ಎನ್ನಯ್ಯ
ನಿನ್ನಾಸೆ ನನಗೇ ಅನುಗಾಲ


ಯಾರಾಸೆ ನಿನಗೆ ಪಾರಿವಾಳದಾಸೆ
ನೀರಾಸೆ ಮರದ ನೆರಳಾಸೆ
ಕಂದಯ್ಯ ನಿನ್ನಾಸೆ ನನಗೇ ಅನುಗಾಲ


ಕಾಲಾಸೆ ಹೆಳವಂಗೆ ಕಣ್ಣಾಸೆ ಕುರುಡಂಗೆ
ವಸ್ತ್ರದ ಆಸೆ ಬಡವೀಗೆ ಬಲಯ್ಯ
ನಿನ್ನಾಸೆ ನನಗೇ ಅನುಗಾಲ

Saturday, September 20, 2008

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ...


ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ತೊಟ್ಟಲಿನೊಳಗೆ ಪುಟ್ಟ ಕಂದ ಮಲಗಿಹನು
ಸೃಷ್ಟಿಗೊಡೆಯನ ಮಡದಿಯ,ಪಾರ್ವತಿ ದೇವಿ
ದೃಷ್ಟಿ ತಗುಲೀತು ತೆರೆ ಹಾಕ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ಅಳಬೇಡ ನನ ಕಂದ ನಿನಗೆ ಜೋಗುಳ ಹಾಡಿ
ಹುಣ್ಣಿಮೆ ಹಾಲು ತಂದು ಉಣಿಸೇನ,ಮಾವನ ಮಗಳ
ಕರ ತಂದು ಧಾರೆ ಎರೆದೇನ....

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ


ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಾಗ ಆಡುವಾಗ
ಸನ್ಯಾಸಿ ಜಪವಾ ಮರೆತಾನೂ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

Thursday, April 3, 2008

ನನ್ನ ಕೃಷ್ಣ


ಅಳಬೇಡೋ ನನ್ನ ಕೃಷ್ಣ
ಹಾಲು ಮಾರಿ ಬರ್ತೀನಿ
ಕಾಲಿಗೆ ಕಡಗ ತರ್ತೀನಿ
ಮೊಸರು ಮಾರಿ ಬರ್ತೀನಿ
ಹಸಿರು ಅಂಗಿ ತರ್ತೀನಿ
ಬೆಣ್ಣೆ ಮಾರಿ ಬರ್ತೀನಿ
ಬಣ್ಣದ ಗಿಲಕಿ ತರ್ತೀನಿ
ತುಪ್ಪ ಮಾರಿ ಬರ್ತೀನಿ
ಒಪ್ಪಿದ ಹುಡುಗಿ ತರ್ತೀನಿ
ಅಳಬೇಡೋ ನನ್ನ ಕೃಷ್ಣ

Sunday, December 30, 2007

ಆಡಿ ಬಾ ಕಂದಯ್ಯ...


ಆಡಿ ಬಾ ಕಂದಯ್ಯ ಅಂಗಾಲ ತೊಳೆದೇನು
ತೆಂಗಿನ ಕಾಯಿ ಎಳನೀರ ತಕ್ಕೊಂಡು
ಬಂಗಾರದಾ ಪಾದ ತೊಳೆದೇನು

ಹವ್ವಲ್ಲೆ ಹಸಿ ಮುದ್ದು ಹಣ್ಣು ತಾವರೆ ಮುದ್ದು
ಹಣ್ಣುಳ್ಳ ಮರಕೇ ಗಿಣಿ ಮುದ್ದೂ
ಕಂದಯ್ಯ ನಮ್ಮ ಮನೆಗೇ ನೀ ಮುದ್ದೂ

(ಧನ್ಯವಾದಗಳು-ಈ ಜನಪದ ಸಾಹಿತ್ಯವನ್ನು ಅಮ್ಮುವಿಗಾಗಿ ನೆನಪಿಸಿಕೊಂಡು ಹೇಳಿದವರು- ನನ್ನ ಅತ್ತೆ ಶ್ರೀಮತಿ ಸ್ವರ್ಣಾಂಬ ಶಂಕರ ನಾರಾಯಣ.)

Monday, August 20, 2007

ಯಾಕಳುವೆ ಎಲೆ ರಂಗ...



ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗ


ಕುಡಿ ಹುಬ್ಬು ಬೇವಿನ ಎಸಳ್ಹಂಗ


ಕಣ್ಣೋಟ ಶಿವನ ಕೈಯಲುಗು ಹೊಳೆದಂಗ...


ಜೋ...ಜೋ... ಜೋ...



ಹಾಲ್ಬೇಡಿ ಅತ್ತಾನ,ಕೋಲ್ಬೇಡಿ ಕುಣಿದಾನ


ಮೊಸರ್ ಬೇಡಿ ಕೆಸರಾ ತುಳಿದಾನ


ಕಂದಯ್ಯನ ಕುಸುಲಾದ ಗೆಜ್ಜೆ ಕೆಸರಾಯ್ತು...


ಜೋ...ಜೋ... ಜೋ...


ಅತ್ತಾರೆ ಅಳಲವ್ವ ಈ ಕೂಸು ನಮಗಿರಲಿ


ಕೆಟ್ಟಾರೆ ಕೆಡಲಿ ಮನೆಗೆಲಸ ಹೊರೆಗೆಲಸ


ಮಕ್ಕಳಿರಲವ್ವ ನಿನ್ನಂಥಾ...


ಜೋ...ಜೋ... ಜೋ...


ಮಕ್ಕಳಾಟವು ಚೆಂದ ಮತ್ತೆ ಯೌವನ ಚೆಂದ


ಮುಪ್ಪಿನಲಿ ಚೆಂದ ನೆರೆಗಡ್ಡ


ಜಗದೊಳಗೆ ಎತ್ತ ನೋಡಿದರೂ ನಗು ಚೆಂದ


ಜೋ...ಜೋ... ಜೋ...


ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೇನು


ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆ


ನೀ ಕೇಳಿದಾಗೆಲ್ಲ ಕೊಡುವೇನೂ...


ಜೋ...ಜೋ... ಜೋ...


ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ


ಕೂಸು ಕಂದಯ್ಯ ಒಳ ಹೊರಗ ಆಡಿದರ


ಬೀಸಣೀಗೆ ಗಾಳೀ ಸುಳಿದಾವೂ...


ಜೋ...ಜೋ... ಜೋ...