Tuesday, July 12, 2011

New Acronym

ಕಳೆದ ಕೆಲವು ದಿನಗಳಿಂದ ಅಪ್ಪಿ `ಇಂಬಿ ಐ' ಅಂಡ್ `ಎಂಬಿ ಐ' ಅಂತ ಜೋರಾಗಿ ಅರಚುತ್ತಾ
ಟೇಬಲ್ ಮೇಲಿಂದ ಕುರ್ಚಿ ಮೇಲಿಂದ ಹೀಗೆ ಎಲ್ಲೆಂದರಲ್ಲಿ ಹಾರಿ ಕುಣಿಯುತ್ತಿದ್ದ
`ಇಂಬಿ ಐ ಅಂಡ್ ಎಂಬಿ ಐ' ಅಂದರೇನು?
ತಲೆ ಕೆರೆದುಕೊಂಡೆ....
ಯಾವುದಿದು ಹೊಸಾ ಅಕ್ರೋನಿಮ್ಮು ?
ನನಗೆ ಗೊತ್ತಿರುವ ಪ್ರಪಂಚದ್ದಂತು ಅಲ್ಲ ಅನ್ನಿಸಿತು
ಕೊನೆಗೊಮ್ಮೆ ಅದರ ಮೂಲ ಕಂಡು ಹಿಡಿದಾಗ ಉದ್ದ ಉಸಿರು !
Toy story ಚಿತ್ರ ನೋಡಿದ ಪ್ರಭಾವ !

Saturday, July 9, 2011

ಶ್ಲೋಕ ಪಠಣ-೧

ಇವತ್ತು ಅರವಿಂದ ಅಮ್ಮುವಿಗೆ ಶ್ಲೋಕ ಹೇಳಿಕೊಡುತ್ತಿರುವಾಗ ಕಿವಿಗೆ ಬಿದ್ದ ಸಾಲುಗಳು
ಅಪ್ಪ-...ಏಕದಂತ....
ಮಗ-...ಮೇಕೆದಂತ.....

ಅಪ್ಪ-...ಕಾಶ್ಮೀರ ಪುರವಾಸಿನೀ...
ಮಗ-ಕಾಶ್ಮೀಯ ಪುರ್ ವಾಸ್ ನೀ....

Friday, July 8, 2011

ನಮ್ಮ ನಾಯಕ!!!


ಮೊನ್ನೆ ನಮ್ಮ ಸ್ನೇಹಿತರೊಡನೆ ಬಿಗ್ ಸರ್ ನಲ್ಲಿ ಕ್ಯಾಂಪಿಂಗ್
ಮಾಡಿದೆವು
ಅವರ ಏಳು ವರ್ಷದ ಮಗಳೊಂದಿಗೆ ಅಮ್ಮು ಸಕತ್ತು ಆಟ ಆಡಿದ
ಮಜಾ ಮಾಡಿದ........
ನದಿಯಲ್ಲಿ ಆಡಿ....... ಮರ ಹತ್ತಿ....
ಒಂದು ಸಣ್ಣ ಹೈಕ್ ಎರಡು ಮೈಲಿಯದ್ದು ಮಾಡಿದ
ಕೊನೆ ಕೊನೆಯಲ್ಲಿ ನಡೆಯಲು ಗೊಣಗುತ್ತಿದ್ದ ಮಗಳಿಗೆ ಹುರುಪು ತುಂಬಲು ಸ್ನೇಹಿತರು
ಹು ಇಸ್ ದ ಲೀಡರ್ ? ಅಂತ ಕೇಳಿದ್ದಕ್ಕೆ
ಐಯಂ ದಿ ಲೀಡರ್...ಅಂತ ಉತ್ಸಾಹದಿಂದ ಕೂಗುತ್ತಾ ಓಡಿದಳು ಹುಡುಗಿ
ನಮ್ಮ ಹಿಂ -ಬಾಲಕನು ಹುಡುಗಿಯನ್ನು ಹಿಂಬಾಲಿಸುತ್ತಾ ಕೂಗುತ್ತಿದ್ದುದು
ಐಯಂ ದಿ ವೀಡರ್.....ಐಯಂ ದಿ ವೀಡರ್.....


Wednesday, June 22, 2011

ಕಿಟ್ಟನೂ, ವಿಕ್ಸೂ .....


ನಮ್ಮೂರಲ್ಲಿ ಒಂದೆರಡು ದಿನಗಳಿಂದ ತುಂಬಾ ಸೆಕೆ
ನೆನ್ನೆ ರಾತ್ರಿ ನನಗೆ ಸೆಕೆ ಯಿಂದಾಗಿ ವಿಪರೀತ ತಲೆ ನೋಯುತ್ತಿತ್ತು
ಹಾಸಿಗೆಯಲ್ಲಿ ಅಂಗಾತ ಮಲಗಿಕೊಂಡು ಸೈಡ್ ಟೇಬಲ್ ಮೇಲಿದ್ದ
ವಿಕ್ಸ್ ಹಚ್ಚಿ ಕೊಳ್ಳೋಣವೆಂದು ಕೈಗೆತ್ತಿಕೊಂಡೆ
ಇಲ್ಲಿ ಅಮೆರಿಕಾದಲ್ಲಿ ಸಿಗುವ ವಿಕ್ಸ್ ನಮ್ಮ ಭಾರತದ ವಿಕ್ಸನ ವಾಸನೆ ಇರುವುದಿಲ್ಲ
ಅಥವಾ ಅದರ ವಾಸನೆ ನನಗೆ ಅಷ್ಟು ಹಿತ ಕೊಡುವುದಿಲ್ಲ
ಹಾಗಾಗಿ ಊರಿಗೆ ಬಂದಾಗಲೆಲ್ಲಾ ದೊಡ್ಡ ವಿಕ್ಸ್ ಡಬ್ಬಿ ತರುತ್ತೇನೆ
ಮಲಗಿಕೊಂಡು ಆಕಳಿಸುತ್ತಾ ಮುಚ್ಚಳ ತೆರೆದರೆ ತಟ ಪಟ ಅಂತ ವಿಕ್ಸು ಹಣೆ ಮೇಲೆ ಬಿತ್ತು !
ಸಕೆಗಾಲದಲ್ಲಿ ಕೊಬ್ಬರಿ ಎಣ್ಣೆಯು ನೀರಾಗುವುದು ನೋಡಿದ್ದೆ.
ಆದರೆ ವಿಕ್ಸೂ ಕರಗುತ್ತಾ ?ಇರಬಹುದೇನೋ.... ಕಲಿಗಾಲ !
ಆದರೆ ವಿಕ್ಸಿಗೆ ಈ ಸುವಾಸನೆ ಹೇಗೆ ಬಂತೋ ?
ನಿದ್ದೆಗಣ್ಣಿ ನಲ್ಲೇ ಯೋಚಿಸಿದೆ
ಹೊಳೆಯಲಿಲ್ಲ
ತೂಕಡಿಸುತ್ತಾ ನನಗೇನು ಭ್ರಮೆಯಾ ಅಂತ ಗೊಣಗಿಕೊಂಡೆ
ಹಾಸುಗೆಯ ಆಬದಿಯಿಂದ ಉತ್ತರಬಂತು` ಭ್ರಮೆಯೂ ಇಲ್ಲ ಭೂತವು ಇಲ್ಲ
ಪಕ್ಕದಲ್ಲಿ ಮಲಗಿರುವ ನಿನ್ನ ಕುಮಾರನ ಕರಾಮತ್ತು....'
ಕಿಟ್ಟ ವಿಕ್ಸ್ ಡಬ್ಬಿಯ ತುಂಬಾ ನಿವಿಯಾ ಬಾಡಿ ಲೋಶನ್ ತುಂಬಿಟ್ಟು ಬಿಟ್ಟಿದ್ದ !!!

Tuesday, June 21, 2011

Frog Puraana..!

ಇವತ್ತು ಅಡುಗೆ ಮನೆಯಲ್ಲಿದ್ದೆ ಓಪನ್ ಕಿಚನ್ನಿನ ಆ ಭಾಗದಿಂದ ವೆಲ್ವೆಟ್ ಕಪ್ಪೆ ಹಾರಿ ಬಂದು ಸಿಂಕ್ ನಲ್ಲಿ ಬಿತ್ತು
ತಾನು ಬೀಳುವಾಗ ಕೌಂಟರ್ ನ ಮೇಲಿದ್ದ ನಾಜೂಕು ಸಾಮಾನುಗಳನ್ನು ಸಿಂಕ್ ನಲ್ಲಿ ಕೆಡವಿತು
ನಾನು ರೇಗಿ ಈ ಅವಗಢಕ್ಕೆ ಕಾರಣ ಕರ್ತನಿಗೆ ಟೈಮ್ ಔಟ್ ಕೊಟ್ಟೆ

ಇದು ಅನ್ಯಾಯ ಅಂತ ನನ್ನ ಹತ್ರ ವಾದ ಮಾಡಲು ಬಂದ
`Maamaa... I don't like timeout......'

`ಮತ್ತೆ frog ಯಾಕೆ ಎಸೆದದ್ದು?'

`because..... Frog needs to stay in the creek....'

ಏನು ಕ್ರೀಕಾ..? ಎಲ್ಲಿದೆ ಅದು ?

`here...(showing sink)

~..................!!!!!!'

(ತುಂಬಾ ಸಮಾಧಾನವಾಗಿ ನನಗೆ ವಿವರಿಸಿದ )

`Maamaa...frog needs to go home...Water....OK.....
.....and I don't like timeout.....'

ನಾನು ಮುಂದೆ ಮಾತಾಡುವ ಮೊದಲೇ ಅಲ್ಲಿಂದ ಪರಾರಿ !

Monday, June 20, 2011

ಈಜುಕೊಳದಲ್ಲಿ....

ಇಲ್ಲಿ ಜೋರಾಗಿ ಬೇಸಿಗೆ ಹೊಡೆಯುತ್ತಿದೆ ಇವತ್ತೆಲ್ಲಾ ತೊಂಬತ್ತರ ಮೇಲೆ ಇದ್ದ ತಾಪಕ್ಕೆ ಅಮ್ಮುಗೆ ತುಂಬಾ ಇರುಸು ಮುರುಸು
ನೀರು ಕುಡಿದದ್ದೇ ಕುಡಿದದ್ದು ಸಂಜೆ ಹೊತ್ತಿಗೆ ನಡೀ ಸ್ವಿಮಿಂಗ್ ಪುಲ್ ಗೆ ಹೋಗೋಣಾ ಅಂತ ಗಂಟುಬಿದ್ದ
ಸರಿ ಅಂತ ಈ ಸಿಸನ್ನಿನ ಈಜು ಉದ್ಘಾಟನೆ ಮಾಡಲು ಕರಕೊಂಡು ಹೋದೆ
ಹೋದವರ್ಷ ನಿರಿಗಿಳಿದಿದ್ದು ಮರೆತು ಹೋಗಿತ್ತು ಅವನಿಗೆ ನೀರು ಕಂಡರೆ ಬಲೆ ಇಷ್ಟ ವಾದರೂ ಯಾಕೋ ಭಯ ಪಡುತ್ತಿದ್ದ
ಮೊದಲನೇ ದಿನ ಅಂತ ನಾನು ಬಲವಂತ ಮಾಡದೆ ನನ್ನ ಪಾಡಿಗೆ ನಾನು ಈಜಿ ಕೊಳ್ಳುತ್ತಿದ್ದೆ ನಾನೇನು ಒಳ್ಳೆ ಈಜುಗಾರ್ತಿಯಲ್ಲ
ಸುಮಾರಾಗಿ ಕೈ ಕಾಲು ಆಡಿಸುತ್ತಿದ್ದೆ
ಅಮ್ಮು ಮೊದಲ ಮೆಟ್ಟಿಲಲ್ಲಿ ಕೂತು ನನಗೆ ನೀರು ಎರೆಚುತ್ತಾ ನಾನು
ಮತ್ತೆ ಅವನಿಗೆ ನೀರು ಉಗ್ಗುತ್ತಾ ಇದ್ದದ್ದು ಮಜವಾಗಿತ್ತು
ಇದ್ದಕ್ಕಿದ್ದ ಹಾಗೆ ಹೇಳಿದ `ಕಂ ಮಾಮ ಐ
ವಿಲ್ ಡ್ರೈ ಯುವರ್ ಹೇರ್....
ನನಗೆ ಕಣ್ ಕಣ್ಣು ಬಿಡುವಂತಾಯಿತು
ಬಾರೋ ತಲೆ ಒರೆಸ್ತೀನಿ ಇಲ್ದಿದ್ರೆ ಕೋಲ್ಡ್ ಆಗಿ ಬಿಡುತ್ತೆ ಅಂತ ನಾನು ಗದರಿಸುವ ಜೋರಾದ ಸ್ವರದಲ್ಲಿ ಹೇಳುತ್ತಿರುತ್ತೇನೆ ಅವನಿಗೆ...
ಅವನೋ ಮೆಲ್ಲಗೆ ಅನುನಯಿಸುವ ದನಿಯಲ್ಲಿ ನನ್ನ ಕರೆಯುತ್ತಿದ್ದಾನೆ....
ಈ ಜುಕೊಳದ ಅಂಚಿಗೆ ಬಂದೆ ಅಮ್ಮು ಬಗ್ಗಿ ನನ್ನ ಒದ್ದೆ ಜಡೆ ಹಿಡಿದು ಎರಡಾಗಿ ಮಡಿಸಿ ಪುಟ್ಟ ಪುಟ್ಟ ಕೈಗಳಿಂದ ಮೆತ್ತ ಮೆತ್ತಗೆ ಹಿಂಡಿ
ಹಿಯರ್ ಯು
ಗೋ ಮಾಮಾ ಇಟ್ಸ್ ಆಲ್ ಡ್ರೈ ..ಅಂದ
ಯಾಕೋ ಒಂದು ಕ್ಷಣ ನಾನೇ ಮಗಳು ಅವನೇ ತಂದೆ ಅನ್ನಿಸಿತು ನನಗೆ.....

Wednesday, June 8, 2011

ಮಾವಿನ ಹಣ್ಣಿನ ಇಲಿ ತೂತು

ನೆನ್ನೆ ಹಣ್ಣಿನ ಬುಟ್ಟಿಯಲ್ಲಿದ್ದ ಮಾವಿನ ಹಣ್ಣು ಅಪ್ಪಿ ಕಣ್ಣಿಗೆ ಬಿತ್ತು
ಇಗ್ಲೇ ತಿನ್ನಕ್ಕೆ ಬೇಕು ಅಂತ ಹಠ ಮಾಡಲು ಶುರು ಮಾಡಿದ
ಇನ್ನೇನು ಅಡುಗೆ ಆಯಿತು ಊಟ ಮಾಡಿ ತಿನ್ನುವಂತೆ ಅಂದರು ಕೇಳಲಿಲ್ಲ
ನಾನು ಸಾರಿಗೆ ಒಗ್ಗರಣೆ ಹಾಕಿ ಮುಗಿಸುವಾಗ ಹುಳ್ಳನಂತೆ ನಗುತ್ತಾಬಂದ ಏನು ಅಂತ ಹುಬ್ಬೇರಿಸಿದೆ
ಎಲ್ಲಾ ಮಾವಿನ ಹಣ್ಣಿನ ಮೇಲು ಇಲಿ ತರ ಬೆರಳಲ್ಲಿ ತೂತು ಕೊರೆದು ಬಿಟ್ಟಿದ್ದಾನೆ!

ನನಗೆ ಸಿಟ್ಟು ರೇಗಿ ಹೋಯಿತು time out ಕೊಟ್ಟೆ
ಮೂಲೆಯಲ್ಲಿ ನಿಂತು ಕುಯ್ಯೋ ಅಂತ ಇಪ್ಪತ್ತು ಸೆಕೆಂಡು ಅತ್ತು ನೋಡಿದ
ನಾನು ಕರಗಲಿಲ್ಲ
ಮೆಲ್ಲ ಮೆಲ್ಲಗೆ ಹೆಜ್ಜೆ ಇಟ್ಟು
ಬಂದು ತನ್ನ
ಪುಟ್ಟ ತೋಳುಗಳಿಂದ ನನ್ನ ಕುತ್ತಿಗೆ ಬಳಸಿ
ಮಾಮಾ ಐ ಯಾಮ್ ಸಾರೀ ...ಪ್ಲೀಸ್ ಫಾರ್ ಗಿವ್ ಮೀ... ಅಂದ
ನನ್ನ ಪುಟ್ಟ ಕೃಷ್ಣ....
ಕರಗಿ ಹೋಗದೆ ಏನು ಮಾಡಲಿ...?

OPiT!!!

ಬಹಳ ದಿನಗಳ ಬಳಿಕ ಮೊನ್ನೆ ನಮ್ಮ ಮನೆಗೆ ನಮ್ಮ ಸ್ನೇಹಿತ ದಂಪತಿಗಳು ಅಮ್ಮುವನ್ನು ನೋಡಿ ಕಣ್ಣರಳಿಸಿ ಎಷ್ಟುದ್ದ ಆಗಿಬಿಟ್ಟಿದ್ದಾನೆ ಅಂತ ಅಚ್ಚರಿಪಟ್ಟರು ಇವನೇನೋ ಆಟಿಕೆ ಅವರ ಹತ್ರ ತೊಗೊಂಡು ಹೋಗಿ ಓಪನ್ ಇಟ್ ಅಂತ ಗೋಳು ಹೊಯ್ದು ಕೊಳ್ಳಲು ಶುರು ಮಾಡಿದ ನಮ್ಮ ಗೆಳತಿಗೆ ವಿಪರಿತ ಸಂಭ್ರಮವಾಗಿ ಗಂಡನಿಗೆ ನೋಡೋ ಮೊದಲೆಲ್ಲಾ ಅಮ್ಮು ಓಪಿಟ್ ಅನ್ನುತ್ತಿದ್ದವನು ಈಗ ಓಪನ್ ಇಟ್ ಅಂತ ಹೇಳೋಕ್ಕೆ ಕಲ್ತು ಬಿಟ್ಟಿದಾನೆ ಅಂತ ಹೇಳಿದಳು ನನಗೆ ಅಮ್ಮು ಓಪಿಟ್ ಅಂತ ಹೇಳುತ್ತಿದ್ದುದೆ ನೆನಪಿಗೆ ಬರಲಿಲ್ಲ ! ಹೌದಾ ಹಾಗೆ ಹೇಳುತ್ತಿದ್ದನಾ ನನಗೆ ನೆನಪಾಗುತ್ತಿಲ್ಲಾ ಅಂದೆ ಖಂಡಿತಾ ..ಅಂತ ಗೆಳತಿ ಪ್ರಮಾಣ ಮಾಡಿ ಅವತ್ತಿಂದ ನಾವಿಬ್ಬರು ಓಪಿಟ್ ಅಂತಾನೆ ಹೇಳೋದು.... ಅಮ್ಮುನ ನೆನಪಿಸಿಕೊಂಡು ಅಂದರು!
ನನ್ನ ಅಕ್ಕನ ಮಗನನ್ನೇ ಅನುಸರಿಸಿ ನಾನು ಅರವಿಂದನೂ ಚಂದಮಾಮ ಅನ್ನಲು
`ದಮಾಮ' ಅಂತಲೂ ಬೆಂಗಳೂರಿಗೆ ಬದಲಿಗೆ `ಬೆನ್ಜೂ' ಎಂದು ಮಾತಾಡುತ್ತಿದ್ದದ್ದು ನೆನಪಾಯಿತು
ಅವನ ಅಮ್ಮನಿಗೆ ಅದರ ನೆನಪೇ ಇಲ್ಲ!
ಇನ್ನು ಮೇಲೆ ಅಮ್ಮು ಮಾತಾಡುವುದನ್ನು ಅದರ ಬೆಳವಣಿಗೆಯನ್ನು ಮರೀದೆ ದಾಖಲಿಸಬೇಕೆಂದು ಕೊಂಡಿದ್ದೇನೆ
ಸೋಮಾರಿತನ ಬಿಟ್ಟು !!!

Monday, January 17, 2011

ಬಾಳೆಹಣ್ಣಿನ ಡಬ್ಬವೂ ಮತ್ತು ರೆಕ್ಟ್ಯಾಂಗಲ್ಲೂ

ಇವತ್ತು ಅಮ್ಮುವಿನ ಶಾಲೆ ಮಾರ್ಟಿನ್ ಲೂಥರ್ ಕಿಂಗ್ ನ ಸ್ಮರಣಾರ್ಥ ರಜ.ಮನೆಯಲ್ಲಿ ಬೇಜಾರಾಗುತ್ತಾನೆಂದು ಅದೂ ಇದೂ ಮಾಡಿಸುತ್ತಿದ್ದೆ.ಸ್ಟಿಕ್ಕರ್ ಅಂಟಿಸುವುದು, ಕಲರ್ ಮಾಡುವುದು ಹೀಗೇ...ಥಾಮಸ್ ಟ್ರೈನ್ ಅವನಿಗೆ ಪಂಚ ಪ್ರಾಣ ಅದರ activity kit ಯಾವುದೋ ಹುಟ್ಟು ಹಬ್ಬದಲ್ಲಿ ಉಡುಗೊರೆಯಾಗಿ ಸಿಕ್ಕಿದ್ದು ಇವನು ಇನ್ನೂ ಪುಟ್ಟವನೆಂದು ನಾನು ಜೋಪಾನ ಮಾಡಿ ಇಟ್ಟದ್ದು
ಸಿಕ್ಕಿತು ಅದನ್ನು ತೆರೆದು ಇಬ್ಬರೂ ಕೂತೆವು ಸ್ವಲ್ಪ ಹೊತ್ತು ಕಲರ್ ಮಾಡಿ ಆಯಿತು ಅಮ್ಮುವಿನ ಕಣ್ಣುಬಿದ್ದದ್ದು ನಾಲ್ಕು ಕ್ರೆಯಾನ್ ಗಳನ್ನು ಹಾಕಿ ಕೊಟ್ಟ ಪುಟಾಣಿ ಪೊಟ್ಟಣದ ಪ್ಯಾಕಿಂಗ್ ಮಟೀರಿಯಲ್ ಮೇಲೆ.Ohhh...! here is rectangle ಅಂತ ಹೇಳುತ್ತಾ ನಾನು ಬಿಸಾಡಬೇಕೆಂದು ಇಟ್ಟಿದ್ದ ಆ ರೊಟ್ಟಿನ ಚೂರಿನಿಂದನೇ ಅವನೊಂದು ಆಟ ಮಾಡಿಕೊಂಡು ಬಿಟ್ಟ!
ಪುಟ್ಟಾಣಿ ಕ್ರೆಯಾನ್ ಪೊಟ್ಟಣವನ್ನು ಅದರ ತೂತಿನಲ್ಲಿ ಸೇರಿಸುವ ಆಟ...
ನನ್ನನ್ನು ಪರೀಕ್ಷಿಸುವುದು ಬೇರೆ ! ಪೊಟ್ಟಣವನ್ನು ಬೇರೆ ಬೇರೆ ಕೋನಗಳಲ್ಲಿ ಇಟ್ಟು Is it fits? ಅಂತ ಕೇಳೋನು ನಾನು ಉತ್ತರಿಸಬೇಕು ನಂತರ ಸ್ವಲ್ಪ ಜರುಗಿಸಿ ಮತ್ತೆ ಪ್ರಶ್ನೆ.....ಕೊನೆಗೊಮ್ಮೆ ಅದು ಸರಿಯಾದ ಜಾಗದಲ್ಲಿ ಕೂತು ನಾವಿಬ್ಬರೂ
ವಿಜಯೋತ್ಸಾಹದಿಂದ `hey...we did it..! ಅಂತ ಕೂಗೋದು!

*********************
ಕನ್ನಡ ಕೂಟದ ಕ್ಯಾಪಿಂಗ್ ಗೆ ಹೋಗಿದ್ವಿ ಅಮ್ಮು ಪುಟ್ಟವನಿದ್ದಾಗ 2008ರ oct ನಲ್ಲಿರಬೇಕು
ಅಲ್ಲಿಂದ ವಾಪಸು ಬರುವಾಗ ಬಾಳೆಹಣ್ಣಿನ ಗಟ್ಟು ಮುಟ್ಟಾದ ರೊಟ್ಟಿನ ಡಬ್ಬದಲ್ಲಿ ಒಂದಿಷ್ಟು ಸಾಮಾನು ಮನೆಗೆ ಬಂತು
ಸಾಮಾನು ಖಾಲಿಮಾಡಿ ಡಬ್ಬ/ಕೋಕ ಬಿಸಾಡೋಣವೆಂದರೆ ಮಗು ಅಮ್ಮು ಅದನ್ನು ಗಟ್ಟಿಯಾಗಿ ಹಿಡಕೊಂಡು ಕೂತು ಬಿಟ್ಟಿದ್ದ
ನಂಗೆ ಇದು ಬೇಕೇ ಬೇಕು ಅಂತ.
‘ ಅಲ್ವೋ..... ಮನೆ ತುಂಬಾ ಆಟಸಾಮಾನು ಇದೆಯಲ್ಲೋ ಈ ಡಬ್ಬ ಯಾಕೆ ಬೇಕೂ...’ ಅಂತ ಅಪ್ಪ ಹೇಳಿದರೂ ಕೇಳಲಿಲ್ಲ ಅವನು . ಸರಿ ಚಿಲಿಯದ್ದೋ ಈಕ್ವೆಡಾರ್ ದ್ದೊ ಬ್ರ್ಯಾಂಡ್ ನ ಬಾಳೆಹಣ್ಣುಗಳ ಚಿತ್ರವಿದ್ದ ಆ ಡಬ್ಬ ನಮ್ಮ ಮನೆಯಲ್ಲಿ ಸುಮಾರು ದಿನ ವಿರಾಜಮಾನವಾಗಿತ್ತು all in one ಆಗಿ.... ಆಟಕ್ಕೂ ಅದೆ, ಊಟ ಮಾಡಲು ಕೂರಲೂ ಅದೆ,
ಆಟಿಕೆ ತುಂಬಿಡಲೂ ಅದೆ,ಕೊನೆಗವನು ತೂಕಡಿಸುವುದೂ ಅದರೊಳಗೆ ಕೂತೇ...ಅದು ಅವನಿಗೆ ಬೋಟೂ, ಟೇಬಲ್ಲೂ, ಸ್ಟೋರೇಜೂ,ಮಂಚವೂ, ಟೋಪಿಯೂ ಆಗಿತ್ತು!
ಮಕ್ಕಳು ಎಷ್ಟು ಕ್ರಿಯೇಟಿವ್ ಅಲ್ವಾ..?

(ಮರೆತ ಮಾತು-ಕೊನೆಗೊಂದು ದಿನ ಅದು ಹರಿದುಮುರಿದು ಹೋಗಿ ಅಮ್ಮು ಕಣ್ಣು ತಪ್ಪಿಸಿ ಟ್ರ್ಯಾಷ್ ನಲ್ಲಿ ಬಿಸಾಡಿ ಬಂದಾಗ ನನಗೆ ತುಂಬಾ ಬೇಜಾರಾಗಿ ಅಳು ಬಂದು ಬಿಟ್ಟಿತು! ಅವನು ನಿದ್ದೆಯಿಂದ ಎದ್ದು ಒಮ್ಮೆ ಅದರ ಬಗ್ಗೆ ಕೇಳಿ ಸುಮ್ಮನಾದ...)