Monday, January 12, 2009

ಎಳ್ಳು ಎರೆವ ಹಾಡು

ಅಮರ್ತ್ಯನಿಗೆ ಎಳ್ಳು ಎರೆದ ಹಾಡು

ಮುತ್ತಿನ ಹಸೆ ಬರೆದು ರತ್ನದ ಮಣೆ ಹಾಕಿ
ರೇಶ್ಮೆ ಸೀರೆಯುಟ್ಟ ನೀರೆಯರು
ಹಸೆಗೆ ಬಾ ಅಮರ್ತ್ಯ ಕುಮಾರ
ಎಂದು ಕರೆದರು...


ಮುದ್ದು ಮುಖದ ತುಂಬ ಮಲ್ಲಿಗೆಗೆ ನಗು ಚೆಲ್ಲುತ್ತ
ಮೆಲ್ಲ ಮೆಲ್ಲನೆ ಅಂಬೆಗಾಲಿಡುತ
ಅಮರ್ತ್ಯ ಕುಮಾರನು ಬಿಂಕದಿ
ಹಸೆಗೆ ಬಂದನು...


ಅಂದದ ಹಸೆಯಲ್ಲಿ ಅಮರ್ತ್ಯನ ಕುಳ್ಳಿರಿಸಿ
ಅಲ್ಲಿ ನೆರೆದ ಲಲಿತಾಂಗಿಯರೆಲ್ಲ
ಬೆಳ್ಳಿಯ ಬಟ್ಟಲಲಿ ಎಳ್ಳು ಎರೆದರು
ಚೆಂದದಿ ನಗುನಗುತಲೀ....


ಎಳ್ಳು ಬೆಲ್ಲ ಕೊಬ್ಬರಿಯ ಎರೆದರು
ಎಲಚಿ ಹಣ್ಣು ಒಣದ್ರಾಕ್ಷಿ ಬಾದಾಮಿಗಳನೆರೆದರು
ಸಾಲದೆಂದು ಮುತ್ತಿನ ಮಣಿಗಳ
ಮತ್ತೆ ಸುವರ್ಣ ಪುಷ್ಪಗಳನೆರೆದರು...


ನಗುನಗುತ ಬಾಳಪ್ಪ ಅಮರ್ತ್ಯ ಕುಮಾರ
ಸಮವಾದ ದೃಷ್ಟಿ ಹಿರಿದಾದ ಮನಸು
ಆರೋಗ್ಯ ಸೌಖ್ಯ ಸುಖಗಳು ನಿನಗೊದಗಲೀ
ಜಯಮಂಗಳ ನಿತ್ಯ ಶುಭ ಮಂಗಳ...

ಕಳೆದ ವರ್ಷ ಅಮ್ಮಣ್ಣನಿಗೆ ಎಳ್ಳು ಎರೆಯುವಾಗ ಹಾಡಲು ನನಗೆ ಯಾವ ಹಾಡೂ ಸಿಗಲಿಲ್ಲವೆಂದು ನಂತರ ನಾನೇ ಬರೆದುಕೊಂಡಿದ್ದು ಈ ಹಾಡು ಈ ವರ್ಷ ಹಾಡೋಣವೆಂದು ಕೊಂಡಿದ್ದೇನೆ ನೀವೂ ನಿಮ್ಮಮಗುವಿಗೆ ಹಾಡಲಿ ಅಂತ ಹಬ್ಬಕ್ಕೆ ಮುಂಚೆಯೇ ಹಾಕಿದ್ದೇನೆ

ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು

1 comment:

Unknown said...

ammNNa ammakka ammuvina haaDu bahaLa sogasaagide :)