ಪುಟ್ಟ ಹಕ್ಕಿ, ಬಾ...
ಪುಟ್ಟ ಹಕ್ಕಿ, ಪುಟ್ಟ ಹಕ್ಕಿ, ಎತ್ತ ಹಾರುತಿರುವೆ?
ಪುಟ್ಟ ಹಕ್ಕಿ, ಪುಟ್ಟ ಹಕ್ಕಿ, ಎತ್ತ ಹಾರುತಿರುವೆ?
ಅತ್ತ ಇತ್ತ ನೋಡಿಕೊಂಡು, ಮತ್ತೆ ಓಡುತಿರುವೆ?
ಗಾಳಿ ಬೀಸಿ, ಧೂಳು ಹಾಸಿ, ಕೆಮ್ಮುತಿರುವೆ, ಬಾ
ಸಿಹಿಯ ನೀರ ಬೊಗಸೆಯಲ್ಲಿ ಹಿಡಿವೆ ನಿನಗೆ, ಬಾ
ಮಳೆಯು ಬಂತು, ಛಳಿಯು ಉಂಟು, ನನ್ನ ಜೊತೆಗೆ ಬಾ
ಅಮ್ಮ ಹೊಲಿದ ಗಾದಿಯೊಳಗೆ ಬೆಚ್ಚಗಿಡುವೆ, ಬಾ
ಕಾಳು ಸಿಗದೆ, ಶಕ್ತಿ ಇರದೆ, ಬಿಕ್ಕುತಿರುವೆ, ಬಾ
ಅಪ್ಪ ತಂದ ತಿಂಡಿಯನ್ನು ಹಂಚಿ ಕೊಡುವೆ, ಬಾ
ಕತ್ತಲಾಯ್ತು, ದೀಪ ಹೋಯ್ತು, ಇಲ್ಲೆ ನಿಲ್ಲು, ಬಾ
ಅಣ್ಣ ಕೊಟ್ಟ ಗರಿಯ ಮರಿಯ ನಿನಗೆ ಮುಡಿವೆ, ಬಾ
ಬೆಳಗು ಬರಲಿ, ರವಿಯು ನಗಲಿ, ಹೊರಗೆ ಲೋಕದಲ್ಲಿ
ಅಲ್ಲಿತನಕ ಜೊತೆಯಲಿರುವ, ನನ್ನ ಕೋಣೆಯಲ್ಲಿ.
-ಸುಪ್ತದೀಪ್ತಿ
*************
ನಂದಗೋಕುಲದ ಮತ್ತು ಅಮ್ಮುವಿನ ಮೇಲಿನ ಅಕ್ಕರೆಯಿಂದ ಕವನ ಬರೆದುಕೊಟ್ಟ ಸುಪ್ತದೀಪ್ತಿಯವರಿಗೂ, ಚಿತ್ರ ಬಿಡಿಸಿಕೊಟ್ಟ ನಿತೀಶ್ ಗೂ ಅಮ್ಮುವಿನಮ್ಮನ ಥ್ಯಾಂಕ್ಸ್
2 comments:
ಮಾಲಾ ಅವರೆ...
ಎಲ್ಲವೂ ಚೆನ್ನಾಗಿವೆ. ಅಕ್ಕರೆಯ ಸುಪ್ತದೀಪ್ತಿಯವರ ಸಾಲುಗಳು, ಅದಕಂಟಿಕೊಂಡಿಹ ಹಕ್ಕಿ ಮರಿಯ ಚಿತ್ರ ಎಲ್ಲವೂ...
ನಮಸ್ತೇ ಮಾಲಾ ಅವರೇ ,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಶ್ರೀಧರ
Post a Comment