Thursday, September 4, 2008
Friday, August 29, 2008
Monday, August 11, 2008
ತಟ್ಟಿ ತಟ್ಟೀ ರಂಗಯ್ಯ
ಕಾಳಿ ಮುದ್ದು ರಂಗಯ್ಯ
ಬಾಯಿಗೆ ಬೆಣ್ಣೆ ಇಡಿಸಯ್ಯ
ಕಣ್ಣಿಗೆ ನಿದ್ದೆ ಬರಿಸಯ್ಯ
ತಟ್ಟೀ ತಟ್ಟಿ ರಂಗಯ್ಯಾ
ತಟ್ಟೀ ತಟ್ಟಿ ರಂಗಯ್ಯಾ
ರನ್ನದಗುಂಡು ರಂಗಯ್ಯ
ಚಿನ್ನದ ತಟ್ಟೆ ತರಿಸಯ್ಯ
ತುಪ್ಪ ಅನ್ನ ಉಣಿಸಯ್ಯ
ಕಣ್ಣಿಗೆ ನಿದ್ದೆ ಬರಿಸಯ್ಯ
ತಟ್ಟೀ ತಟ್ಟಿ ರಂಗಯ್ಯಾ
ತಟ್ಟೀ ತಟ್ಟಿ ರಂಗಯ್ಯಾ
ಬೆಳ್ಳಿ ಕಡಗದ ರಂಗಯ್ಯ
ಪಚ್ಚೆ ಬಟ್ಟಲ ತರಿಸಯ್ಯ
ಸಕ್ಕರೆ ಸಜ್ಜಿಗೆ ಉಣಿಸಯ್ಯ
ಕಣ್ಣಿಗೆ ನಿದ್ದೆ ಬರಿಸಯ್ಯ
ತಟ್ಟೀ ತಟ್ಟಿ ರಂಗಯ್ಯಾ
ತಟ್ಟೀ ತಟ್ಟಿ ರಂಗಯ್ಯಾ
ಮುತ್ತಿನಪದಕ ರಂಗಯ್ಯ
ಬೆಳ್ಳಿಲೋಟವ ತರಿಸಯ್ಯ
ಕಣ್ಣಿಗೆ ನಿದ್ದೆ ಬರಿಸಯ್ಯ
ತಟ್ಟೀ ತಟ್ಟಿ ರಂಗಯ್ಯಾ
ಇಂಡಿಯಾಗೆ ಹೋದಾಗ ಈಹಾಡಿನ ಮೊದಲ ನುಡಿ ಕೇಳಿದ್ದು ಅಮ್ಮುವಿನ ಅಜ್ಜಿ ಬಾಯಲ್ಲಿ. ಮಿಕ್ಕ ನುಡಿಗಳನ್ನು ನಾನೇ ಹೆಣೆದು ಸೇರಿಸಿದ್ದು ಅಮ್ಮುವಿನ ಚಿತ್ರ ಹಳೆಯದು ಆದರೆ ಹಳೆ ಚಿತ್ರಗಳು ಪ್ರತಿ ಬಾರಿಯೂ ತರುವ ಸವಿಗೆ ಹಳೆತನವೇನೂ ಇಲ್ಲವಲ್ಲ!
Thursday, August 7, 2008
ನಮ್ಮ ಬೆಸ್ತರ ಹುಡುಗಿ!
Friday, August 1, 2008
ಮೊಲದ ಮರಿ... ಮೊಲದ ಮರಿ...
ಮೊಲದ ಮರಿ ಮೊಲದ ಮರಿ
ಆಡು ಬಾರೇ..
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ
ಏನು ಮಾಡುವೆ
ಹೆಡ್ಡ ನೀನು ಪೊದರಿನೊಳಗೆ
ಏಕೆ ಅಡಗುವೆ?
ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ
ಗಿಡ್ಡ ಬಾಲ ದೊಡ್ದ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದ
ಗೂಡು ಕಟ್ಟಿತಿಂಡಿ ಕೊಡುವೆ
ಪ್ರೀತಿಯಿಂದ
ಕಾಡಬಿಟ್ಟು ಊರ ಸೇರೋ
ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
**********
ನನ್ನ ತಂಗಿ ಎರಡು ಜುಟ್ಟು ಕಟ್ಟಿಕೊಂಡು ಈ ಮೊಲದ ಹಾಡು ಹಾಡುತ್ತಾ ಜಿಗಿಯುತ್ತಾ ಡ್ಯಾನ್ಸ್ ಮಾಡುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ, ಇದು ನನಗೂ ಮೆಚ್ಚಿನ ಹಾಡಾಗಿತ್ತು...
*******
ಚಿತ್ರ ಕೃಪೆ-ಲೈವ್ ಸರ್ಚ್
Tuesday, July 29, 2008
ಮಾತಿನ ಮಲ್ಲ ಅಮ್ಮು....
ಆಗಾಗ ಅವನು ಹೊಸ ಪದಗಳನ್ನು ವಟವಟಾಯಿಸಿದಾಗಲೆಲ್ಲಾ ಇಲ್ಲಿ ಅವುಗಳು ಕಾಣಿಸಿಕೊಳ್ಳುತ್ತವೆ
ಅವನು ಮಾತಾಡಿದ್ದಕ್ಕೆಲ್ಲಾ ಅರ್ಥ ಇರಲೇ ಬೇಕೆಂದು ನಿಯಮವೇನೂ ಇಲ್ಲವಷ್ಟೇ ಅಥ್ವಾ ಅವನ ಪ್ರತಿ ಪದಕ್ಕೂ ಖಂಡಿತಾ ಅರ್ಥವಿದ್ದೇ ಇರುತ್ತದೆ ಜಗತ್ತಿನ ಯಾವುದೋ ಭಾಷೆಯಲ್ಲಿ ಎಂಬ ನಂಬಿಕೆಯೊಂದಿಗೆ...
ಈಗೆರಡು ತಿಂಗಳ ಹಿಂದೆ ಒಂದು ವರ್ಷದವನಿದ್ದಾಗ ಅಮರ್ತ್ಯ ಪದೇ ಪದೇ ಹೇಳುತ್ತಿದ್ದದು ಬಾ... ಬಾ...ಬಕ್ಕ ಬಾ... ಅಂತ
ಬಾ ಮತ್ತು ಬಕ್ಕ ಗಳ ಎಲ್ಲಾ ಪರ್ಮುಟೇಶನ್ ಕಾಂಬಿನೇಶನ್ಗಳನ್ನು ಮಾಡಿ ಹೇಳುತ್ತಿದ್ದ
ಬಕ್ಕ... ಬಕ್ಕ... ಬಕ್ಕ...ಬಾ...
ಬಕ್ಕ... ಬಾ..ಬಾ ಮತ್ತು
ಬಕ್ಕ.. ಬಕ್ಕ ..ಬಾ.. ಬಾ.. ಬಾ..
ಬಕ್ಕ..ಬಕ್ಕ.. ಬಾಆಆಆಅ..ಇತ್ಯಾದಿ ಇತ್ಯಾದಿ
ಇಲ್ಲಾ,ಇಲಾ ,ಇಲ್ಯಾ.ಇಲ್ಲಲ್ಲ.ಇಲ್ಲಿಲ್ಲಾ ಇವು ತುಂಬಾ ಮೊದಲಿನಿಂದ ಇದ್ದವು
ಈಗ ಇವುಗಳ ಜೊತೆ ಹಕ್ಕ ಬುಕ್ಕರಂತೆ ಬಕ್ಕ ಮತ್ತು ಬಾ ಸೇರಿಕೊಂಡವು
ಈ ಇಲ್ಲ ಸರಣಿ ಮತ್ತು ಬಕ್ಕ ಬಾ ಗಳ ನಡುವಿನ ಅವಧಿಯಲ್ಲಿ ಅಮ್ಮ ಅಮ್ಮಿ ಶುರುವಾಗಿದ್ದು.
ಕೆಲವು ದಿನ ನನ್ನನ್ನು ಅಮ್ಮ ಅಂತ ಕರೆದು ನಂತರ ನಮ್ಮಿಬ್ಬರನ್ನೂ ಅಮ್ಮ ಅಂತ ಕರೆಯಲು ಶುರು ಮಾಡಿದ
ಒಂದೆರಡು ದಿನ ಬೇರೇನೋ ವಸ್ತು ಅಮ್ಮ ಆಗಿತ್ತು ಮತ್ತು ನಂತರ ಅಮ್ಮ ಮಾಯವಾಯಿತು
ಈಗ ಮತ್ತೆ ಅಮ್ಮ ಬಂದಿದೆ
ಅಫ್ ಕೋರ್ಸ್ ಜೊತೆಗೊಂದು ಬಾಲದೊಂದಿಗೆ "ಅಮ್ಮಮಮ್ಮಾ"ಅಂತ
ಈ ಬಾರಿ he is clear ನಾನು ಮಾತ್ರ ಅಮ್ಮಮಮ್ಮ!
ಅಪ್ಪ ಪಾಪ...ಸದ್ಯಕ್ಕೆ ಹೆಸರಿಲ್ಲದ ಪ್ರಾಣಿ!
ಕಾವೇರಿಯಲ್ಲೂ ಮರ್ಸೆಡ್ ನಲ್ಲೂ ಸಾಕಷ್ಟು ನೀರು ಹರಿದಿದೆಯಲ್ಲಾ..
ಹಾಗೇ ಅಮರ್ತ್ಯನ ಅರ್ಥವಿಲ್ಲದ ಮಾತಿನ ಸರಣಿಯೂ ಹರಿದಿದೆ
ಸುಸಂಬದ್ದವಲ್ಲದ ಅಕ್ಷರ ಸರಣಿಯನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಕಷ್ಟ
ಕಾ...ಕಯಮ್..ಜಮ್..ಜುಮ್...ಗಂ..ಕಿಕ್ಕ..ಪಿಪ್ಯಾ...ಪಿಕೋ..
ಹೀಗೆಲ್ಲಾ ಇಡೀ ದಿನ ವಾರ್ತಾಲಾಪ ನಡೆಯುತ್ತಿರುತ್ತದೆ ಕೆಲವೊಮ್ಮೆ ಮಧ್ಯರಾತ್ರಿ ನಡು ಹಾಸಿಗೆಯಲ್ಲಿ ಎದ್ದು ಕುಳಿತು ಸಂಗೀತ ಕಛೇರಿ ಶುರು ಮಾಡಿ ಬಿಡುತ್ತಾನೆ
ಈಗೆರಡು ದಿನದಿಂದ ಬೀ ಮತ್ತು ಬೇ ಶುರುವಾಗಿದೆ
ಎರಡು ಯಾವಾಗಲೂ ಜೊತೆ ಜೊತೆಗೇ ಬಾಯಿಂದ ಹೊರಬರುತ್ತವೆ
ಕೆಲವು ಉದಾಹರಣೆಗಳು ಹೀಗೆ....
ಬೀಬಿ-ಯಾವ ಬೀಬಿಯೋ ಇವಳು .. ಚಾಂದ್ ಬೀಬಿ ಇರಬಹುದಾ?
ಬೇ ಬೇ- ನಾನು ಚಿಕ್ಕವಳಿದ್ದಾಗ 'ಬೇಡ' ಎನ್ನಲು ಬೇ ಬೇ ಅನ್ನುತ್ತಿದ್ದೆನಂತೆ ಹಾಗಂತ ಅಮ್ಮ ಹೇಳ್ತಾರೆ ನನ್ನ ಮಗನಿಗೂ ರಕ್ತದಲ್ಲೇ ಇದು ಬಂದಿರಬಹುದಾ!!!
ಬೇಬಿ-ಇದು ಬೊಂಬಾಟ್ ನೆನ್ನೆ ವಾಕಿಂಗ್ ಕರೆದು ಕೊಂಡು ಹೋದಾಗ ಸುಮಾರು ತನ್ನಷ್ಟೇ ವಯಸ್ಸಿನ ಮಗುವನ್ನು ಅಮ್ಮು 'ಬೇಬಿ...'ಅಂತ ಕರೆದು ನಿಂತಲ್ಲೇ ನಿಂತು ಬಿಟ್ಟಆ ಬೇಬಿಯ ಚೀನೀ ಅಪ್ಪ ಅಮ್ಮನಿಗೆ ಖುಷಿಯೋ ಖುಷಿ.ನಾನು ಮೊದಲು ನಿಮ್ಮ ಮಗುವನ್ನಲ್ಲಾ ಅವನು ಬೇಬಿ ಅಂದಿದ್ದು ಅಂತ ಆ ಚೀನಿ ದಂಪತಿಗಳಿಗೆ ಸಮಜಾಯಿಸಲು ಪ್ರಯತ್ನಿಸಿದೆನಾದರೂ ಅವರು ನನ್ನ ಮಾತು ಕೇಳಲೇ ತಯಾರಿರಲ್ಲಿಲ್ಲ ಇವನು ತನ್ನೆಲ್ಲಾ ಅಸಂಬದ್ಧ ಪ್ರಲಾಪಗಳ ನಡುವೆ ಇನ್ನೊಮ್ಮೆ ಬೇಬಿ ಅನ್ನುತ್ತಾನೇನೋ ಅಂತ ಕಾದುಕೊಂಡು ಇವನನ್ನು ಮಾತಾಡಲು ಪ್ರೋತ್ಸಾಹಿಸುತ್ತಿದ್ದರು ಇವನೂ ಸಿಕ್ಕಿದ್ದೇ ಚಾನ್ಸು ಅಂತ ಬಾಯಿಗೆ ಬಂದಿದ್ದನ್ನೆಲ್ಲಾ ವದರುತ್ತಿದ್ದ ಎರಡೂ ಪಾರ್ಟಿಯವರೂ ಸಂತೋಷವಾಗಿರುವಾಗ ನನ್ನದೇನು ಕಿತಾಪತಿ ಅಂತ ಕೊನೆಗೆ ನಾನು ಸುಮ್ಮನಾಗಿ ಬಿಟ್ಟೆ
Friday, July 25, 2008
ಅಮರ್ತ್ಯ ಕುಮಾರಿಯವರಿಂದ ಹೊಸ ಪಕ್ಷ ಸ್ಥಾಪನೆ
(ಅಮರ್ತ್ಯಕುಮಾರಿಗೆ ಕೋಪ ಬಂದಿದೆ.......)
ಅಮ್ಮ ಯಾವಾಗ್ಲೂ ಅದು ತಿನ್ನು ಇದು ತಿನ್ನು ಅಂತಿರ್ತಾಳೆ....
ಬುಂ...ಬುಂ....
ಅಮರ್ತ್ಯ ಕುಮಾರಿಯು ನಗು ಮುಖದಿಂದ ಹೊಸ ಉಪಾಯವೊಂದನ್ನು ಯೋಚಿಸಿ ಕೊಂಡವಳಾಗಿ ಬಿಲ್ಲಿ ರಾಜನನ್ನು ಮಾತನಾಡಿಸುತ್ತಾಳೆ
ಊಊಊಊಊಊಊಊಊಊಊಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್
ಇಳಿತಿದೀನಿ .......
ಧಮ್...ಧಡಮ್...ಧಡಮ್.....(ಅಂತೂ ವಿಮಾನ ಲ್ಯಾಂಡ್ ಆಯಿತು...)
ನಾನೊಂದು ಹೊಸ ಪಕ್ಷ ಮಾಡುತ್ತಿದ್ದೇನೆ
"ಊಟ ಬೇಡ" ಪಕ್ಷ
ಮಕ್ಕಳಿಗೆ ಊಟ ಮಾಡಿಸುವ ಅಪ್ಪ ಅಮ್ಮನಿಗೆ ಧಿಕ್ಕಾರ....!
ಬನ್ನಿ ...ಬನ್ನಿ...
ನಮ್ಮ ಪಕ್ಷ ಸೇರಿದರೆ ನೀವು.....
ಊಟ ಮಾಡಬೇಕಿಲ್ಲ
ಹಾಲು ಕುಡಿಯ ಬೇಕಿಲ್ಲ
ಹಣ್ಣು ,ತರಕಾರಿ ಹತ್ತಿರ ಸಹ ಹೋಗಬೇಕಿಲ್ಲ
ನಮ್ಮ ಪಕ್ಷಕ್ಕೆ ನಿಮ್ಮ ಭಯಂಕರ ಬೆಂಬಲ ನೀಡಿ
ಊಟ ಮಾಡದಿರುವದು ನಮ್ಮ ಜನ್ಮಸಿದ್ದ ಹಕ್ಕು
and we shall have it.....
(ಅಸಂಖ್ಯಾತ ಬೆಂಬಲಿಗರು ಅಮರ್ತ್ಯ ಕುಮಾರಿಯವರ ಹೊಸ ಪಕ್ಷ ಸೇರಲು ತುದಿಗಾಲಲ್ಲಿ ಅಂಬೆಗಾಲಿಡುತ್ತಾ, ತಪ್ಪು ಹೆಜ್ಜೆ ಇಟ್ಟು ಬೀಳುತ್ತಾ ಏಳುತ್ತಾ ತಮ್ಮ ಬೆಂಬಲ ಸೂಚಿಸುತ್ತಿರಲು ತೆರೆ ನಿಧಾನವಾಗಿ ಬೀಳುತ್ತದೆ)
Monday, July 21, 2008
Thursday, July 17, 2008
Saturday, July 12, 2008
Subscribe to:
Posts (Atom)